ದೀರ್ಘಕಾಲದ ಪವರ್ ಫುಲ್ ನಾಯಕ.. 2001 ರಿಂದ ಇಂದಿನವರೆಗೆ ನಿರಂತರ ಜನಾದೇಶ; ಚಾಮ್ಲಿಂಗ್ ದಾಖಲೆ ಅಳಿಸಿಹಾಕಿದ ಪ್ರಧಾನಿ ಮೋದಿ! | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತದ ಅತ್ಯಂತ ದೀರ್ಘಾವಧಿಯ ಸರ್ಕಾರದ ಮುಖ್ಯಸ್ಥರಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು, ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ದಶಕಗಳ ಕಾಲ ಹೊಂದಿದ್ದ ಸುದೀರ್ಘ ಆಡಳಿತದ ದಾಖಲೆಯನ್ನು ಮೋದಿ ಇಂದು (ಮಾ.22) ಅಧಿಕೃತವಾಗಿ ಹಿಂದಿಕ್ಕಿದ್ದಾರೆ.
ಸಿಕ್ಕಿಂ ಮುಖ್ಯಮಂತ್ರಿಯಾಗಿ ಸತತ 8,930 ದಿನಗಳ ಕಾಲ ಅಧಿಕಾರ ನಡೆಸಿದ್ದ ಪವನ್ ಕುಮಾರ್ ಚಾಮ್ಲಿಂಗ್, ಭಾರತದ ದೀರ್ಘಾವಧಿಯ ಸರ್ಕಾರದ ಮುಖ್ಯಸ್ಥ ಎಂಬ ದಾಖಲೆ ಹೊಂದಿದ್ದರು. ಇಂದು ನರೇಂದ್ರ ಮೋದಿ ಆಡಳಿತದಲ್ಲಿ 8,931 ದಿನಗಳನ್ನು ಪೂರೈಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.
ಇದು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನ ಮಂತ್ರಿಯಾಗಿ ಒಟ್ಟು ನಿರ್ವಹಿಸಿದ ಜವಾಬ್ದಾರಿಯ ಅವಧಿಯನ್ನು ಒಳಗೊಂಡಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದಶಕಗಳ ಕಾಲ ನಿರಂತರ ಜನಾದೇಶ ಪಡೆಯುವ ಮೂಲಕ ಮೋದಿ ಭಾರತೀಯ ರಾಜಕೀಯದ ಅಪರೂಪದ ನಾಯಕನಾಗಿ ಹೊರಹೊಮ್ಮಿದ್ದಾರೆ.

ಪ್ರಧಾನಿ ಮೋದಿ ಹಿನ್ನಲೆ

ಗುಜರಾತ್‌ನ ವಡ್ನಗರದ ಸಾಧಾರಣ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿಯವರ ರಾಜಕೀಯ ಪ್ರಯಾಣ ಅತ್ಯಂತ ಸ್ಪೂರ್ತಿದಾಯಕವಾಗಿದೆ. ರೈಲ್ವೆ ನಿಲ್ದಾಣದಲ್ಲಿ ತಂದೆಗೆ ಚಹಾ ಮಾರಾಟ ಮಾಡಲು ನೆರವಾಗುತ್ತಿದ್ದ ಬಾಲಕ, ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಸಂಘಟನೆಯ ಮೂಲಕ ಬೆಳೆದು ಬಂದರು.
2001 ರಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, 2014 ರಲ್ಲಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲು ಒಂದು ದಶಕಕ್ಕೂ ಹೆಚ್ಚು ಕಾಲ ರಾಜ್ಯವನ್ನು ಮುನ್ನಡೆಸಿದ್ದರು. ಭಾರತದ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಇಂದಿರಾ ಗಾಂಧಿ ಅವರು ಸತತವಾಗಿ 4,077 ದಿನಗಳ ಕಾಲ ಪ್ರಧಾನಿಯಾಗಿದ್ದ ದಾಖಲೆಯನ್ನು ಕಳೆದ ವರ್ಷ (ಜುಲೈ 25, 2025) ಮುರಿದಿದ್ದ ಪ್ರಧಾನಿ ಮೋದಿ, ಆ ಅವಧಿಯನ್ನು ದಾಟಿ, ಈಗ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ದೇಶದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಮೊದಲ ಸ್ಥಾನದಲ್ಲಿ ಜವಾಹರಲಾಲ್ ನೆಹರು ಅವರಿದ್ದಾರೆ.
ಎರಡು ಪೂರ್ಣ ಅವಧಿ ಮುಗಿಸಿ, ಮೂರನೇ ಬಾರಿಗೆ ಅಧಿಕಾರಕ್ಕೇರಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಗೂ ಮೋದಿ ಭಾಜನರಾಗಿದ್ದು, 1971 ರಲ್ಲಿ ಇಂದಿರಾ ಗಾಂಧಿಯವರ ಬಳಿಕ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಮೊದಲ ಹಾಲಿ ಪ್ರಧಾನಿ ಎಂಬುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net